50 ವರ್ಷಗಳ ಹೋರಾಟಕ್ಕೆ ಅಂತ್ಯ: ಐಗಳಿಯಲ್ಲಿ ಮುಸ್ಲಿಂ ಸಮಾಜಕ್ಕೆ 2 ಎಕರೆ ಖಬರಸ್ತಾನ ಜಮೀನು ಮಂಜೂರು.!! ಸುಮಾರು ಐವತ್ತು ವರ್ಷಗಳಿಂದ ಅಥಣಿ ತಾಲೂಕಿನ ಐಗಳಿ ...
50 ವರ್ಷಗಳ ಹೋರಾಟಕ್ಕೆ ಅಂತ್ಯ: ಐಗಳಿಯಲ್ಲಿ ಮುಸ್ಲಿಂ ಸಮಾಜಕ್ಕೆ 2 ಎಕರೆ ಖಬರಸ್ತಾನ ಜಮೀನು ಮಂಜೂರು.!!
ಸುಮಾರು ಐವತ್ತು ವರ್ಷಗಳಿಂದ ಅಥಣಿ ತಾಲೂಕಿನ ಐಗಳಿ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶದ ಮುಸ್ಲಿಂ ಸಮಾಜದ ಜನರು ಮಶಾನ (ಖಬರಸ್ತಾನ) ಸಮಸ್ಯೆಯನ್ನು ಎದುರಿಸುತ್ತಿದ್ದರು.
ಅನೇಕ ಬಾರಿ ಮನವಿ, ಅರ್ಜಿ, ಹೋರಾಟ ನಡೆದರೂ ಕೂಡ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿರಲಿಲ್ಲ.
ಆದರೆ ಇದೀಗ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಹಾಗೂ ಚಿಕ್ಕೋಡಿ ಸ್ಥಳೀಯ ಸಂಸದರಾಗಿ ಕು.ಪ್ರಿಯಾಂಕಾ ಜಾರಕಿಹೊಳಿ ಅವರ ವಿಶೇಷ ಕಾಳಜಿ ಮತ್ತು ಪ್ರಯತ್ನದಿಂದ, ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.
ಅಥಣಿಯ ಕಾಂಗ್ರೆಸ್ ಹಿರಿಯ ಮುಖಂಡರಾದ ಶ್ರೀ ಸದಾಶಿವ ಬುಟಾಳಿ ಹಾಗೂ ಕಾಂಗ್ರೆಸ್ ಮುಖಂಡ ಶ್ರೀ ರಮೇಶ್ ಸಿಂದಗಿ ಅವರ ಸಹಕಾರ ಮತ್ತು ಮಾರ್ಗದರ್ಶನದಿಂದ, ಮುಸ್ಲಿಂ ಸಮಾಜಕ್ಕೆ ಎರಡು ಎಕರೆ ಜಮೀನು ಸ್ಮಶಾನಕ್ಕಾಗಿ ಅಧಿಕೃತವಾಗಿ ಮಂಜೂರು ಮಾಡಲಾಗಿದೆ.
ತಹಶೀಲ್ದಾರ ಅಥಣಿ ಹಾಗೂ ಉಪವಿಭಾಗಾಧಿಕಾರಿ ಚಿಕ್ಕೋಡಿ ಇವರ ವರದಿ ಆಧರಿಸಿ, ಬೆಳಗಾವಿ ಜಿಲ್ಲಾಧಿಕಾರಿಗಳ ಆದೇಶದಂತೆ ಐಗಳಿ ಗ್ರಾಮದ ಸರ್ವೆ ನಂಬರ್ ಹನ್ನೊಂದರಲ್ಲಿ ಒಟ್ಟು ನಲವತ್ತ್ನಾಲ್ಕು ಎಕರೆ ಹದಿನೆಂಟು ಗುಂಟೆ ಪೈಕಿ, ಎರಡು ಎಕರೆ ಶೂನ್ಯ ಗುಂಟೆ ಜಮೀನನ್ನು ಸಾರ್ವಜನಿಕ ಸ್ಮಶಾನವಾಗಿ ದಾಖಲಿಸಲಾಗಿದೆ.
ಈ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ ಇಪ್ಪತ್ತಿನ ಅಡಿಯಲ್ಲಿ, ನಿರ್ದಿಷ್ಟ ಷರತ್ತುಗಳೊಂದಿಗೆ ಮುಸ್ಲಿಂ ಸಮಾಜಕ್ಕೆ ಮಂಜೂರು ಮಾಡಲಾಗಿದೆ. ಇನ್ನು ಮುಂದೆ ಈ ಜಮೀನನ್ನು ಮುಸ್ಲಿಂ ಸಮಾಜವೇ ನಿರ್ವಹಣೆ ಮಾಡಲಿದೆ.
ಈ ಐತಿಹಾಸಿಕ ಕ್ಷಣಕ್ಕೆ ಸಂತಸಗೊಂಡ ಮುಸ್ಲಿಂ ಸಮಾಜದ ಎಲ್ಲಾ ಸದಸ್ಯರು ಸೇರಿ ಸಚಿವರಾದ ಸತೀಶ್ ಜಾರಕಿಹೊಳಿ, ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ, ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಹುಲ್ ಜಾರಕಿಹೊಳಿ, ಮುಖಂಡರಾದ ಸದಾಶಿವ ಬುಟಾಳಿ ಹಾಗೂ ರಮೇಶ್ ಸಿಂದಗಿ ಅವರಿಗೆ ಸನ್ಮಾನ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಉಸ್ಮಾನ್ ಮುಜಾವರ್, ಬಾಳ ಮುಜಾವರ್, ಜಕೀರ್ ಮುಜಾವರ್, ರಫೀಕ್ ನದಾಫ್, ಮುನೀರ್ ಮುಜಾವರ್, ಇರ್ಸಾದ್ ಮುಜಾವರ್, ರಿಯಾಜ್ ಮಹಲಿಂಗಪುರ್ ಹಾಗೂ ಇನ್ನೂಸ್ ಮುಜಾವರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಐವತ್ತು ವರ್ಷಗಳ ಕನಸು ಇಂದು ಸಾಕಾರಗೊಂಡಿದ್ದು, ಇದು ಕೇವಲ ಭೂ ಮಂಜೂರಾತಿ ಮಾತ್ರವಲ್ಲ, ಸಾಮಾಜಿಕ ನ್ಯಾಯ, ಸೌಹಾರ್ದತೆ ಮತ್ತು ಮಾನವೀಯತೆಯ ದೊಡ್ಡ ಸಂದೇಶವಾಗಿದೆ.
ಇಂತಹ ಜನಪರ ಕಾರ್ಯಗಳು ಮುಂದೆಯೂ ಮುಂದುವರಿಯಲಿ ಎಂಬ ಆಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ವರದಿ. ಬಸೀರ್ ಸಯ್ಯದ್

