ಬೆಂಗಳೂರು :- ಕಬ್ಬು ಬೆಳೆಗಾರರಿಗೆ, ಸಾಗಣೆದಾರರಿಗೆ, ಕಟಾವು ಮಾಡುವವರಿಗೆ ಕೆಲವು ಸಕ್ಕರೆ ಕಾರ್ಖಾನೆಗಳಿಂದ ವಂಚನೆಯಾಗುತ್ತಿದೆ. ತಪ್ಪಿಸಬೇಕು ಎಂದು ಶಾಸಕ ಸ...
ಬೆಂಗಳೂರು :- ಕಬ್ಬು ಬೆಳೆಗಾರರಿಗೆ, ಸಾಗಣೆದಾರರಿಗೆ, ಕಟಾವು ಮಾಡುವವರಿಗೆ ಕೆಲವು ಸಕ್ಕರೆ ಕಾರ್ಖಾನೆಗಳಿಂದ ವಂಚನೆಯಾಗುತ್ತಿದೆ. ತಪ್ಪಿಸಬೇಕು ಎಂದು ಶಾಸಕ ಸವದಿ ವಿಧಾನಸಭೆಯಲ್ಲಿ ಮಾಹಿತಿ ನೀಡಿದರು.
ಹಿಂದಿನ ಸಕ್ಕರೆ ಸಚಿವರು ಏಕಕಾಲದಲ್ಲಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಿದ್ದರು. ಆದರೆ, ಏನು ಪ್ರಯೋಜನ ಆಗಿಲ್ಲ. ತೂಕದಲ್ಲಿ ವ್ಯವಸ್ಥಿತವಾಗಿ ಮೋಸ ಮಾಡಲಾಗುತ್ತಿದೆ. ಈ ವ್ಯವಹಾರವನ್ನೂ ಒಬ್ಬ ವ್ಯಕ್ತಿ ನಿರ್ವಹಿಸುತ್ತಿದ್ದಾರೆ. ಆತನನ್ನು ಭೂಗತ ದೊರೆ ಎನ್ನಬಹುದು.
ಮಹಾರಾಷ್ಟ್ರದಲ್ಲಿ ದೊಡ್ಡ ಜಾಲವೇ ಇದೆ. ತೂಕ ಮಾಡುವ ಸಾಫ್ಟವೇರ್ ಅಳವಡಿಸಿದರೆ, ಖಾಸಗಿ ವೇಬ್ರಿಡ್ಜ್‍ನಲ್ಲಿ ಒಂದು ತೂಕವಾದರೆ, ಕಾರ್ಖಾನೆಗಳಲ್ಲಿ ಕಡಿಮೆ ತೂಕ ಬರಲಿದೆ. ಅದನ್ನು ಪ್ರಶ‍್ನಿಸಿದ ರೈತರ ಮೇಲೆ ಗೂಂಡಾಗಳಿಂದ ಹಲ್ಲೆ ಮಾಡಿಸಿರುವ ಉದಾಹರಣೆಗಳಿವೆ. ಒಂದೊಂದು ಕಾರ್ಖಾನೆಯಲ್ಲೂ 40-50 ಸಾವಿರ ಟನ್ ಕಬ್ಬನ್ನು ಈ ರೀತಿ ವಂಚಿಸಲಾಗುತ್ತಿದೆ. ಮೋಸದ ಹಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಖರೀದಿಗೆ ಮುಂದಾಗಿದ್ದಾರೆ. ಎಲ್ಲ ಕಾರ್ಖಾನೆಗಳು ತೂಕದಲ್ಲಿ ವಂಚಿಸುತ್ತಿಲ್ಲ. ಕೆಲವೊಂದು ಬೆರಳಣಿಕೆಯಷ್ಟು ಕಾರ್ಖಾನೆಗಳು ಮಾತ್ರ ತೂಕವನ್ನು ನಿಖರವಾಗಿ ಮಾಡುತ್ತವೆ ಎಂದು ಹೇಳಿದರು.
ಸಕ್ಕರೆ ಸಚಿವರು ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕು. ಯಾರೇ ಇರಲಿ, ಎಷ್ಟೇ ಬಲಾಢ್ಯರಿರಲಿ, ಒತ್ತಡ ಬಂದರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ನಾವೆಲ್ಲ ನಿಮ್ಮೊಂದಿಗೆ ಇರುತ್ತೇವೆ ಎಂದರು. ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಅವರು , ಖಾಸಗಿ ಸಕ್ಕರೆ ಕಾರ್ಖಾನೆಗಳ ಪೈಕಿ ರಾಜಕಾರಣಿಗಳ ಮಾಲೀಕತ್ವದಲ್ಲೇ ಇದ್ದು, ಏನಾದರೂ ಸುಧಾರಣೆ ಆಗಬೇಕೆಂದರೆ ಇಲ್ಲಿಂದಲೇ ಪ್ರಾರಂಭವಾಗಬೇಕು ಎಂದು ಆಗ್ರಹಿಸಿದರು.