ಪ್ರೇಮಿಯೊಂದಿಗೆ ಇರಲು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನ ಮಹಿಳೆ ತನ್ನ ಸ್ವದೇಶಕ್ಕೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಇದು ಪಾಕಿಸ್ತಾನದಲ್ಲಿ...
ಪ್ರೇಮಿಯೊಂದಿಗೆ ಇರಲು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನ ಮಹಿಳೆ ತನ್ನ ಸ್ವದೇಶಕ್ಕೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಇದು ಪಾಕಿಸ್ತಾನದಲ್ಲಿರುಲು ಮಹಿಳೆಯರಿಗಿರುವ ಭೀತಿಯನ್ನು ಎತ್ತಿ ತೋರಿಸುತ್ತದೆ.
ಸೀಮಾ ಹೈದರ್ ಎಂಬ ಮಹಿಳೆ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಮಹಿಳೆ. ಇವರಿಗೆ ನಾಲ್ವರು ಮಕ್ಕಳಿದ್ದಾರೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ತನ್ನ ಪ್ರೇಮಿ ಸಚಿನ್ ಜೊತೆ ಇರಲು ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದರು. ಈ ಆರೋಪದ ಮೇಲೆ ಈಕೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಿದ್ದಾರೆ.
ಜೊತೆಗೆ ಈಕೆ ತಾನು ಭಾರತೀಯ ಸಂಸ್ಕೃತಿಯನ್ನು ಮನಃಪೂರ್ವಕವಾಗಿ ಸ್ವೀಕರಿಸಿದ್ದೇನೆ ಮತ್ತು ಪಾಕಿಸ್ತಾನಕ್ಕೆ ಮರಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
2019 ರಲ್ಲಿ PUBG ಎಂಬ ಮೊಬೈಲ್ ಗೇಮ್‌ನಲ್ಲಿ ಮಾತನಾಡುವಾಗ ಪಾಕಿಸ್ತಾನಿ ಮಹಿಳೆ ಮತ್ತು ಭಾರತೀಯ ಪುರುಷನ ಪರಿಚಯವಾಗಿದೆ. ಈ ಪ್ರೇಮ ಕಥೆಯು ಅನೇಕ ಜನರಲ್ಲಿ ಕುತೂಹಲ ಮತ್ತು ಉತ್ಸಾಹವನ್ನು ಹುಟ್ಟುಹಾಕಿದೆ.
ತನ್ನ ಪ್ರೇಮಿಯೊಂದಿಗೆ ಇರಲು, ಹೈದರ್ ನೇಪಾಳದ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಮಕ್ಕಳೊಂದಿಗೆ ದಂಪತಿಗಳು ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ.
ನೇಪಾಳದ ಮೂಲಕ ವೀಸಾ ಇಲ್ಲದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಜುಲೈ 4 ರಂದು ಆಕೆಯನ್ನು ಬಂಧಿಸಲಾಗಿತ್ತು. ಆಕೆಗೆ ಸಹಾಯ ಮಾಡಿದ್ದಕ್ಕಾಗಿ ಸಚಿನ್‌ನನ್ನು ಸಹ ಬಂಧಿಸಲಾಯಿತು. ಆದರೆ ಶುಕ್ರವಾರ ಇಬ್ಬರಿಗೆ ಜಾಮೀನು ಸಿಕ್ಕಿದೆ.
ಇಂಡಿಯಾ ಟುಡೆಯೊಂದಿಗೆ ಮಾತನಾಡುತ್ತಾ, ಸೀಮಾ ಹೈದರ್ ತನ್ನ ದೈನಂದಿನ ದಿನಚರಿಯ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ಕೊರಳಲ್ಲಿ ರಾಧೆ ಪಟ್ಟಿಯನ್ನು ಧರಿಸುವುದು, ಜನರನ್ನು ಕೈಮುಗಿದು ನಮಸ್ಕರಿಸುವುದು, ಆಶೀರ್ವಾದಕ್ಕಾಗಿ ಹಿರಿಯರ ಪಾದಗಳನ್ನು ಸ್ಪರ್ಶಿಸುವುದು ಮತ್ತು ದೇವರನ್ನು ಪ್ರಾರ್ಥಿಸುವುದನ್ನು ಸೀಮಾ ರೂಢಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ತಾನು ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇನೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸದ ಸಚಿನ್ ಕುಟುಂಬದಂತೆ ಸಸ್ಯಾಹಾರಿ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ಸೀಮಾಗೆ ಪಾಕಿಸ್ತಾನಕ್ಕೆ ಹಿಂತಿರುಗುವ ಬಯಕೆ ಇಲ್ಲ, ಏಕೆಂದರೆ ಅವರು ಹಿಂತಿರುಗಿದರೆ ಅವರು ಕೊಲ್ಲಲ್ಪಡುತ್ತಾರೆ ಎಂಬ ಭೀತಿ ಇದೆ.
ಆಕೆಯ ಮಕ್ಕಳಿಗೆ ಪಾಕಿಸ್ತಾನಕ್ಕೆ ಮರಳಲು ಅವಕಾಶವಿದ್ದರೂ, ಅವರು ಅವಳೊಂದಿಗೆ ಇರಲು ಆಯ್ಕೆ ಮಾಡಿಕೊಂಡಿದ್ದಾರೆ. ತನ್ನ ಮೊದಲ ಪತಿ ಗುಲಾಮ್ 2020 ರಿಂದ ತನ್ನ ಜೀವನದಿಂದ ದೂರವಾಗಿದ್ದಾರೆ ಎಂದು ಸೀಮಾ ಹೇಳೊಕೊಂಡಿದ್ದಾರೆ. ಸೀಮಾ ಮತ್ತು ಸಚಿನ್ ಅವರ ಸಂಬಂಧವು ಅರಳಿದಾಗ, ಗುಲಾಮ್ ಕೆಲಸದ ನಿಮಿತ್ತ ಸೌದಿ ಅರೇಬಿಯಾದಲ್ಲಿದ್ದರು ಎಂದು ತಿಳಿದು ಬಂದಿದೆ.